Sunday, November 4, 2012

ಕಾಕು-154 ಉತ್ತಮದೊಳಗುತ್ತಮವು ಆವುದಯ್ಯಾ? - ಡಿವಿಡೆಂಡ್/ಗ್ರೋಥ್/ಮರುಹೂಡಿಕೆ ?



ಕಾಕು-154
ಉತ್ತಮದೊಳಗುತ್ತಮವು ಆವುದಯ್ಯಾ?
- ಡಿವಿಡೆಂಡ್/ಗ್ರೋಥ್/ಮರುಹೂಡಿಕೆ ?

ರಾಯರಿಗೆ ಯಾಕೋ ಸಮಾಧಾನವೇ ಇಲ್ಲ. ಕಳೆದ ವಾರ ಬ್ಯಾಂಕಿಗಿಂತ ಉತ್ತಮ ಆವುದಯ್ಯಾ ? ಅಂತ ಕೇಳಿದ್ದಕ್ಕೆ ಡೆಟ್ ಫಂಡುಗಳಲ್ಲಿ ಹೂಡಬಹುದು ಅಂತ ಹೇಳಿ ಒಂದಿಡೀ ಕಾಕು ಕೊರೆದದ್ದಾಯಿತು. ಆದರೂ ರಾಯರಿಗೆ ತೃಪ್ತಿಯಾಗಲಿಲ್ಲ. ಡೆಟ್ ಫಂಡುಗಳಲ್ಲೂ ಗ್ರೋಥ್, ಡಿವಿಡೆಂಡ್, ಡಿವಿಡೆಂಡ್ ಮರುಹೂಡಿಕೆ ಅಂತೆಲ್ಲಾ ಪ್ರಬೇಧಗಳಿವೆಯಲ್ಲಾ? ಯಾವುದರಲ್ಲಿ ಅಂತ ಹೂಡೋದು? ಹೀಗೆ ಅರ್ದಂಬರ್ಧ ಮಾಹಿತಿಕೊಟ್ಟ ಶಾಸ್ತ್ರ ಮಾಡಿ ಮುಂದಿನ ಬಾಲ್ ಬರುವ ಮೊದಲೇ ಕ್ರೀಸ್ ಬಿಟ್ಟು ಓಡಿಹೋದ್ರೆ ನಾವು ಏನು ಮಾಡುವುದು? ಎಂಬುದು ರಾಯರ ಪ್ರಶ್ನೆ.

ಈ ಕಾಕು ಎಂಬ ಹರಿಕತೆ ಆರಂಭವಾದಂದಿನಿಂದ ನೀವುಗಳು ನೋಡುತ್ತಲೇ ಇದ್ದೀರಿ. ಒಂದು ರೀತಿಯ ಜಿಗಣೆ ಥರದ ಮನುಷ್ಯಾರೀ ಇವರು. ಹಿಡ್ದ್ರೆ ಬಿಡೊದೇ ಇಲ್ಲ. ಪ್ರತೀ ಸಲ ಏನಾದರೊಂದು ವಿಷಯ ಹಿಡಿದುಕೊಂಡು ಕಬ್ಬಿನ ಗಾಣದಂದದಲಿ ರಸ ಹಿಂಡುತ್ತಲೇ ಇರುತ್ತಾರೆ-ರಸ ಬರಲಿ ಬಾರದೆ ಇರಲಿ. ಹಿಂಡುವುದಂತೂ ಬಿಡುವುದಿಲ್ಲ ಈ ಕಬ್ಬಿಗ. ಅವರಿಗೆ ಮನೆಯಲ್ಲಂತೂ ಸರಿ ಹೋಗುವುದಿಲ್ಲ. ಮಗ ಸೊಸೆ ಜೊತೆಗೆ ಅಷ್ಟಕ್ಕಷ್ಟೇ! ಒಬ್ಬ ಮೊಮ್ಮಗ ಇದ್ದಾನೆ, ಅವನು  ಅವರನ್ನೇ ಪರ್ಕಳ ಸಂತೆಯಲ್ಲಿ ಕಾಸಿಗೆ iiರಿ ಬಂದಾನು. ಮತ್ತೆ ಎಂತದ್ದು ಮಾಡುವುದು? ಎಲ್ಲಾ ಬಿಟ್ಟು ಕೊನೆಗೆ ನನ್ನನ್ನೇ ಹಿಡೀತಾರೆ, ಪಾಪದವ ಸಿಕ್ಕ ಅಂತ. ‘ಅದು ಎಂತದ್ದು, ಇದು ಎಂತದ್ದು?’ ಅಂತ ಇವರ ಪ್ರಶ್ನಾವಳಿ ಮುಗಿಯುವುದೇ ಇಲ್ಲ ರೀ. . . !!!

***
ಡಿವಿಡೆಂಡ್ ಆಯ್ಕೆ:

ಡಿವಿಡೆಂಡ್ ಆಯ್ಕೆಯಲ್ಲಿ ಹೂಡಿದ ದುಡ್ಡಿನ ಮೇಲೆ ವಾರ್ಷಿಕ ಡಿವಿಡೆಂಡ್ ಬರುತ್ತಾ ಇರುತ್ತದೆ. ಹೂಡಿಕೆಯಲ್ಲಿ ಬಂದ ಆದಾಯವನ್ನು ಡಿವಿಡೆಂಡ್ ಮೂಲಕ ಹೂಡಿಕೆದಾರರಿಗೆ ಪಾವತಿ ಮಾಡಲಾಗುತ್ತದೆ. ನಿರಂತರ ಆದಾಯ ಬೇಕು ಎಂದೆನಿಸುವವರಿಗೆ ಇದು ಉಪಕಾರಿಯಾದೀತು. ಹೂಡಿಕೆದಾರರ ಕೈಯಲ್ಲಿ ಡಿವಿಡೆಂಡ್ ಮೇಲೆ ಕರ ಇರುವುದಿಲ್ಲ. ಯಾಕೆಂದರೆ ಅದು ಡಿವಿಡೆಂಡ್ ಡಿಸ್ಟ್ರಿಬ್ಯೂಷನ್ ಟಾಕ್ಸ್ (ಡಿಡಿಟಿ) ತೆತ್ತ ಬಳಿಕವೇ ಅದು ಕೈಸೇರುತ್ತದೆ. ದೀರ್ಘಕಾಲಿಕ (>೧ ವರ್ಷ) ಫಂಡುಗಳಿಗೆ ಡಿಡಿಟಿ ೧೨.೫% ಹಾಗೂ ಅಲ್ಪಕಾಲಿಕ (<೧ ವರ್ಷ) ಫಂಡುಗಳಿಗೆ ಅದು ೨೫%. ನಮ್ಮ ಕಣ್ಣಿಗೆ ಗೋಚರಿಸದೆ ಇದ್ದರೂ ಈ ತೆರಿಗೆ ಇವೆ. ಹೂಡುವ ಮುನ್ನ ಅದನ್ನು ಗಮನಿಸಬೇಕು.

ಗ್ರೋಥ್ ಆಯ್ಕೆ:

ಇಲ್ಲಿ ನಿಯತಕಾಲಿಕವಾಗಿ ಏನೂ ಸಿಗುವುದಿಲ್ಲ. ಆದ ಲಾಭವೆಲ್ಲಾ ಫಂಡ್ ಮೌಲ್ಯದಲ್ಲಿ ವೃದ್ಧಿಯ ರೂಪದಲ್ಲಿಯೇ ಇರುತ್ತದೆ. ಕೊನೆಗೊಮ್ಮೆ ಲಾಭಾಂಶದೊಂದಿಗೆ ಹೂಡಿಕೆಯನ್ನೇ ಮಾರಿ ದುಡ್ಡು ಪಡೆಯಬೇಕು. ಕಾಲಕಾಲಕ್ಕೆ ಡಿವಿಡೆಂಡ್ ಅಗತ್ಯ ಇಲ್ಲದವರು, ಇರುವ ದುಡ್ಡು ಅಲ್ಲೇ ಇದ್ದು ಇನ್ನೂ ವೃದ್ಧಿಯಾಗಲಿ ಎನ್ನುವವರಿಗೆ ಇದು ಉತ್ತಮ ಆಯ್ಕೆ.

ಡಿವಿಡೆಂಡ್ ಇಲ್ಲದ ಕಾರಣ ಡಿಡಿಟಿಯ ಪ್ರಶ್ನೆ ಬರುವುದಿಲ್ಲ. ಆದರೆ ಹೂಡಿಕೆಯನ್ನೇ ಮಾರಿಬಿಡುವುದರಿಂದ ಕ್ಯಾಪಿಟಲ್ ಗೈನ್ಸ್ ಟಾಕ್ಸ್ ಬರುತ್ತದೆ. ಕ್ಯಾಪಿಟಲ್ ಗೈನ್ಸ್ ಅಂದರೆ ಎರಡು ರೀತಿಯಲ್ಲಿ ಇರುತ್ತದೆ. ಅಲ್ಪಕಾಲಿಕ (< ೧ ವರ್ಷ) ಹೂಡಿಕೆಗೆ ಆ ಆದಾಯವನ್ನು ನಿಮ್ಮ ವಾರ್ಷಿಕ ಆದಾಯಕ್ಕೆ ಸೇರಿಸಿಬಿಟ್ಟು ಅನ್ವಯ ದರದಲ್ಲಿ ಆದಾಯಕರ ನೀಡಬೇಕು. ದೀರ್ಘಕಾಲಿಕ (> ೧ ವರ್ಷ) ಹೂಡಿಕೆಗೆ ಕ್ಯಾಪಿಟಲ್ ವೃದ್ಧಿಯ ೧೦% ಅಥವ ಇಂಡೆಕ್ಸೇಷನ್ ಬಳಿಕ ೨೦%.

ಮರುಹೂಡಿಕೆ ಆಯ್ಕೆ:

ಮರುಹೂಡಿಕೆ ಅಂದರೆ ಮೂಲಭೂತವಾಗಿ ಡಿವಿಡೆಂಡ್ ಆಯ್ಕೆಯೇ ಆಗಿದೆ. ಡಿವಿಡೆಂಡ್ ಆಯ್ಕೆಗೆ ತಗಲುವ ಎಲ್ಲಾ ಕರಖಾಯಿದೆಗಳು ಇಲ್ಲಿ ತಗಲುತ್ತದೆ. ಆದರೆ ಆ ರೀತಿ ಡಿಡಿಟಿ ತೆತ್ತು ಬಂದ ಡಿವಿಡೆಂಡ್ ಅನ್ನು ಅದೇ ಫಂಡಿನಲ್ಲಿ ಆ ದಿನದ ಎನ್‌ಎವಿ ಮೌಲ್ಯಕ್ಕೆ ಮರು ಹೂಡಿಕೆ ಮಾಡಲಾಗುತ್ತದೆ. ಡಿಡಿಟಿ ತೆತ್ತು ವಾಪಾಸು ಅದರಲ್ಲೇ ಹಾಕುವುದು ನಿಜವಾಗಿಯೂ ಒಂದು ದೊಡ್ಡ ನಷ್ಟವೇ ಸರಿ. ಕೇವಲ ಇಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮುಗಳಲ್ಲಿ (ಇಎಲ್‌ಎಸ್‌ಎಸ್ - ಕನಿಷ್ಟ ೬೫% ಇಕ್ವಿಟಿ) ಕರವಿನಾಯಿತಿಗಾಗಿ ಹೂಡಿಕೆಯ ಲಾಭ ಪಡೆಯಲು ಈ ತಂತ್ರವನ್ನು ಉಪಯೋಗಿಸಬಹುದಷ್ಟೆ. ಇಕ್ವಿಟಿ ಫಂಡುಗಳಲ್ಲಿ ಡಿಡಿಟಿ ಹೇಗೂ ಇರುವುದಿಲ್ಲ. ಹಾಗಾಗಿ ಇಕ್ವಿಟಿ ಮತ್ತು ಇಕ್ವಿಟಿ ಪ್ರಧಾನ್ಯ ಫಂಡುಗಳಲ್ಲಿ (ಕನಿಷ್ಠ ೬೫% ಇಕ್ವಿಟಿ) ಈ ತಂತ್ರವನ್ನು ಕರವಿನಾಯಿತಿಯ ದೃಷ್ಟಿಯಿಂದ ಉಪಯೋಗಿಸಿಕೊಳ್ಳಬಹುದು.

ಇವಿಷ್ಟು ಹೂಡಿಕೆಯ ವಿವಿಧ ರೀತಿ (ಡಿವಿಡೆಂಡ್, ಗ್ರೋಥ್ ಮರುಹೂಡಿಕೆ) ಮತ್ತು ಅವುಗಳು ಅಲ್ಪಕಾಲಿಕ/ದೀರ್ಘಕಾಲಿಕ ಡೆಟ್ ಮತ್ತು ಇಕ್ವಿಟಿ ಫಂಡುಗಳಲ್ಲಿ ಬೀರುವ ಪ್ರಭಾವದ ಬಗ್ಗೆ ಮಾತನಾಡಿದ್ದಾಯಿತು. ಇದೀಗ ಜಸ್ಪಾಲ್ ಭಟ್ಟಿ ಸ್ಟೈಲಿನಲ್ಲಿ ಅದನ್ನೇ ಸ್ವಲ್ಪ ಉಲ್ಟಾಪುಲ್ಟಾ ಮಾಡಿ ಒಬ್ಬಾತ ಅಲ್ಪಕಾಲಿಕ/ದೀರ್ಘಕಾಲಿಕ ಡೆಟ್ ಅಥವ ಇಕ್ವಿಟಿ ಫಂಡುಗಳಲ್ಲಿ ಹೂಡುವಾಗ ಡಿವಿಡೆಂಡ್, ಗ್ರೋಥ್ ಅಥವಾ ಮರುಹೂಡಿಕೆಗಳಲ್ಲಿ ಯಾವದನ್ನು ಆಯ್ದುಕೊಳ್ಳಬೇಕು ಎಂದು ನೋಡೋಣ. ಈ ಎರಡೂ ದೃಷ್ಟಿಕೋನಗಳು ಮುಖ್ಯ.

ಅಲ್ಪಕಾಲಿಕ ಡೆಟ್ ಫಂಡ್:

ಇಲ್ಲಿ ಡಿಡಿಟಿ ೧೨.೫%. ಅದರ ಬದಲಾಗಿ ಗ್ರೋಥ್ ಆಯ್ಕೆಗೆ ಹೋದರೆ ಕ್ಯಾಪಿಟಲ್ ಗೈನ್ಸ್ ಅವರವರ ಆದಾಯಕ್ಕೆ ಅನ್ವಯಿಸುವ ದರದಲ್ಲಿ ನೀಡಬೇಕಾಗುತ್ತದೆ. ಆದ್ದರಿಂದ ೧೦% ಆದಾಯಕರದ ಸ್ಲಾಬಿನವರು ೧೨.೫% ಡಿಡಿಟಿಯ ಡಿವಿಡೆಂಡ್ ಆಯ್ಕೆಗೆ ಹೋಗುವುದು ನಷ್ಟಕರ. ಅವರು ಗ್ರೋಥ್ ಆಯ್ಕೆಗೆ ಹೋಗಿ ೧೦% ಕರ ನೀಡುವುದು ಉತ್ತಮ. ಆದರೆ ೨೦% ಹಾಗೂ ೩೦% ಸ್ಲಾಬಿನವರಿಗೆ ೧೨.೫% ಡಿಡಿಟಿ ಕೊಡುವುದೇ ಲಾಭಕರ. ಗ್ರೋಥ್ ಆಯ್ಕೆಗೆ ಹೋದರೆ ೨೦% ಅಥವ ೩೦% ಕರ ನೀಡಬೇಕಾದೀತು.

ಅಲ್ಪಕಾಲಿಕ ಲಿಕ್ವಿಡ್ ಫಂಡ್:

ಇದಕ್ಕೆ ಡಿಡಿಟಿ ೨೫% ಇರುವಕಾರಣ ೧೦% ಮತ್ತು ೨೦% ಕರದ ಸ್ಲಾಬಿನವರಿಗೆ ಗ್ರೋಥ್ ಆಯ್ಕೆಗೆ ಹೋಗಿ ೧೦% ಯಾ ೨೦% ಕ್ಯಾಪಿಟಲ್ ಗೈನ್ಸ್ ತೆರುವುದೇ ಲಾಭಕರ. ೩೦% ಸ್ಲಾಬಿನವರಿಗೆ ೨೫% ಡಿಡಿಟಿ ಬರುವ ಡಿವಿಡೆಂಡ್ ಆಯ್ಕೆಯೇ ಲಾಭಕರ.
ದೀರ್ಘಕಾಲಿಕ ಡೆಟ್ ಫಂಡ್:

ಒಂದು ವರ್ಷ ಮೀರಿದ ಹೂಡಿಕೆಯ ದೀರ್ಘಕಾಲಿಕ ಡೆಟ್ ಮ್ಯೂಚುವಲ್ ಫಂಡುಗಳಿಗೆ ೧೨.೫% ಡಿಡಿಟಿ ಆದರೆ ಕ್ಯಾಪಿಟಲ್ ಗೈನ್ಸ್ ಕೇವಲ ೧೦% (ಅಥವ ೨೦% ಇಂಡೆಕ್ಸೇಷನ್ ಬಳಿಕ, ನಿಮ್ಮ ಆಯ್ಕೆಯಂತೆ) ಆದ್ದರಿಂದ ದೀರ್ಘಕಾಲಿಕ ಡೆಟ್ ಫಂಡಿನವರು ಡಿವಿಡೆಂಡ್ ಆಯ್ಕೆಗೆ ಹೋಗದೆ ಸೀದಾ ಗ್ರೋಥ್ ಆಯ್ಕೆಗೇ ಹೋಗುವುದೇ ಲಾಭಕರ.

ದೀರ್ಘಕಾಲಿಕ ಲಿಕ್ವಿಡ್ ಫಂಡ್:

ಇಲ್ಲಿ ಡಿವಿಡೆಂಡ್ ಆಯ್ಕೆಗೆ ಡಿಡಿಟಿ ೨೫% ಇರುವಕಾರಣ ಗ್ರೋಥ್ ಆಯ್ಕೆಯ ೧೦% (ಅಥವ ೨೦% ಇಂಡೆಕ್ಸೇಷನ್ ಬಳಿಕ, ನಿಮ್ಮ ಆಯ್ಕೆಯಂತೆ) ಆಯ್ಕೆಯೇ ಯಾವತ್ತೂ ಲಾಭಕರ.

ಅಲ್ಪಕಾಲಿಕ ಇಕ್ವಿಟಿ/ಇಕ್ವಿಟಿ ಓರಿಯೆಂಟೆಡ್ ಫಂಡ್:

ಇಕ್ವಿಟಿ ಅಥವ ಇಕ್ವಿಟಿ ಓರಿಯೆಂಟೆಡ್ ಫಂಡುಗಳಿಗೆ ಡಿವಿಡೆಂಡ್ ಮೇಲೆ ಡಿಡಿಟಿ ಇರುವುದಿಲ್ಲ. ಆದರೆ ಗ್ರೋಥ್ ಆಯ್ಕೆಯಲ್ಲಿ ೧೫% ಕ್ಯಾಪಿಟಲ್ ಗೈನ್ಸ್ ಕರ ಇರುತ್ತದೆ. ಆದುದರಿಂದ ಇಲ್ಲಿ ಡಿವಿಡೆಂಡ್ ಆಯ್ಕೆಯೇ ಉತ್ತಮ.

ದೀರ್ಘಕಾಲಿಕ ಇಕ್ವಿಟಿ/ಇಕ್ವಿಟಿ ಓರಿಯೆಂಟೆಡ್ ಫಂಡ್:

ಇಲ್ಲಿ ಡಿಡಿಟಿ ಯೂ ಶೂನ್ಯ, ಕ್ಯಾಪಿಟಲ್ ಗೈನ್ಸ್ ಕರವೂ ಶೂನ್ಯ. ಆದುದರಿಂದ ಡಿವಿಡೆಂಡ್ ಅಥವ ಗ್ರೋಥ್ ಆಯ್ಕೆ ಯಾವುದದರೂ ಕರದೃಷ್ಟಿಯಿಂದ ಒಂದೇ.  


 ಟೇಬಲ್: ವಿವಿಧ ರೀತಿಯ ಹೂಡಿಕೆಗಳು ಮತ್ತು ಕರನೀತಿ